ಹರಿಯು ಪಂಚಾಶದ್ವರಣ ಸು
ಸ್ವರ ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿವಿಸರ್ಗ ಬಿಂದುಗಳೊಳಗೆ ತದ್ವಾಚ್ಯ |
ಇರುವ ತತ್ತನ್ನಾಮರೂಪಗ
ಳರಿತುಪಾಸನೆಗೈವರಿಳೆಯೊಳು
ಸುರರೆ ಸರಿ ನರರಲ್ಲ ಅವರಾಡುವುದೆ ವೇದಾರ್ಥ  ||  ೧  ||

ಈಶನಲಿ ವಿಜ್ಞಾನ ಭಗವ
ದ್ದಾಸರಲಿ ಸದ್ಭಕ್ತಿ ವಿಷಯ ನಿ
ರಾಸೆ ಮಿಥ್ಯಾವಾದದಲಿ ಪ್ರದ್ವೇಷ ನಿತ್ಯದಲಿ |
ಈ ಸಮಸ್ತ ಪ್ರಾಣಿಗಳಲಿ ರ
ಮೇಶನಿಹನೆಂದರಿದವರ ಅಭಿ
ಲಾಷೆಗಳ ಪೂರೈಸುವುದೆ ಮಹಯಜ್ಞ ಹರಿಪೂಜೆ  ||  ೨  ||

ತ್ರಿದಶ ಏಕಾತ್ಮನೆನಿಸಿ ಭೂ
ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರೆನಿಸುವ ಪ್ರಾಣಮುಖ್ಯಾದಿತ್ಯರೊಳು ನೆಲೆಸಿ |
ವಿದಿತನಾಗಿದ್ದನವರತ ನಿರ
ವಧಿಕ ಮಹಿಮನು ಸಕಲ ವಿಷಯವ
ನಿಧನ ನಾಮಕ ಸಂಕರುಷಣಾಹ್ವಯನು ಸ್ವೀಕರಿಪ  ||  ೩  ||

ದಹಿಕ ದೈಶಿಕ ಕಾಲಿಕತ್ರಯ
ಗಹನ ಕರ್ಮಗಳುಂಟು ಇದರೊಳು
ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ |
ಬೃಹತಿ ನಾಮಕ ಭಾರತೀಶನ
ಮಹಿತರೂಪವ ನೆನೆದು ಮನದಲಿ
ಅಹರಹರ್ಭಗವಂತಗರ್ಪಿಸು ಪರಮ ಭಕುತಿಯಲಿ  ||  ೪  ||

ಮೂರು ವಿಧ ಕರ್ಮಗಳೊಳಗೆ ಕಂ
ಸಾರಿ ಭಾರ್ಗವ ಹಯವದನ ಸಂ
ಪ್ರೇರಕನು ತಾನಾಗಿ ನಮರೂಪಂಗಳನು ಧರಿಸಿ |
ಸೂರಿ ಮಾನವ ದಾನವರೊಳು ವಿ
ಕಾರ ಶೂನ್ಯನು ಮಾಡಿ ಮಾಡಿಸಿ
ಸಾರಭೋಕ್ತನು ಸ್ವೀಕರಿಸಿ ಕೊಡುತಿಪ್ಪ ಜೀವರಿಗೆ  ||  ೫  ||

ಅನಲ ಪಕ್ವವ ಗೈಸಿದನ್ನವ
ನನಲನೊಳು ಹೋಮಿಸುವ ತೆರದಂ
ತನಿಮಿಷೇಶನು ಮಾಡಿ ಮಾಡಿಸಿದಖಿಲಕರ್ಮಗಳ |
ಮನವಚನಕಾಯದಲಿ ತಿಳಿದನು
ದಿನದಿ ಕೊಡು ಶಂಕಿಸದೆ ವೃಜಿನಾ
ರ್ದನ ಸದಾ ಕೈಗೊಂಡು ಸಂತಯಿಸುವನು ತನ್ನವರ  ||  ೬  ||

ಕುದುರೆ ಬಾಲದ ಕೊನೆಯ ಕೂದಲ
ತುದಿ ವಿಭಾಗವ ಮಾಡಿ ಶತವಿಧ
ವದರೊಳೊಂದನು ನೂರು ಭಾಗವ ಮಾಡಲೆಂತಿಹುದೊ |
ವಿಧಿಭವಾದಿ ಸಮಸ್ತ ದಿವಿಜರ
ಮೊದಲುಮಾಡಿ ತೃಣಾಂತ ಜೀವರೊ
ಳಧಿಕ ನ್ಯೂನತೆಯಿಲ್ಲವೆಂದಿಗು ಜೀವ ಪರಮಾಣು  ||  ೭  ||

ಜೀವನಂಗುಷ್ಟಾಗ್ರ ಮೂರುತಿ
ಜೀವನಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು |
ಏವಮಾದಿ ಅನಂತರೂಪದಿ
ಯಾವದವಯವಗಳೊಳು ವ್ಯಾಪಿಸಿ
ಕಾವ ಕರುಣಾಳುಗಳ ದೇವನು ಈ ಜಗತ್ರಯವ  ||  ೮  ||

ಬಿಂಬ ಜೀವಾಂಗುಷ್ಟ ಮಾತ್ರದಿ
ಇಂಬುಗೊಂಡಿಹ ಸರ್ವರೊಳು ಸೂ
ಕ್ಷ್ಮಾಂಬರದಿ ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ |
ಎಂಬರೀತಗೆ ಕೋವಿದರು ವಿ
ಶ್ವಂಭರಾತ್ಮಕ ಪ್ರಾಜ್ಞ ಭಕ್ತ ಕು
ಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು  ||  ೯  ||

ಪುರುಷ ನಾಮಕ ಸರ್ವ ಜೀವರೊ
ಳಿರುವ ದೇಹಾಕಾರ ರೂಪದಿ
ಕರಣ ನಿಯಾಮಕ ಹೃಷೀಕಪನಿಂದ್ರಿಯಂಗಳಲಿ |
ತುರಿಯ ನಾಮಕ ವಿಶ್ವ ತಾ ಹ
ನ್ನೆರಡು ಬೆರಳುಳಿದುತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಪ್ಪ  ||  ೧೦  ||

ವ್ಯಾಪಕನು ತಾನಾಗಿ ಜೀವ ಸ್ವ
ರೂಪ ದೇಹದ ಒಳ ಹೊರಗೆ ನಿ
ರ್ಲೇಪನಾಗಿಹ ಜೀವ ಕ್ರುತ ಕರ್ಮಗಳನಾಛರಿಸಿ |
ಶ್ರೀ ಪಯೋಜಭವೇರರಿಂದ ಪ್ರ
ದೀಪ ವರ್ಣ ಸುಮೂರ್ತಿ ಮಧ್ಯಗ
ತಾ ಪೊಳೆವ ವಿಶ್ವಾದಿ ರೂಪದಿ ಸೇವೆ ಕೈಗೊಳುತ  ||  ೧೧  ||

ಗರುಡ ಶೇಷ ಭವಾದಿ ನಾಮವ
ಧರಿಸಿ ಪವನ ಸ್ವರೂಪ ದೇಹದಿ
ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ |
ಸರಸಿಜಾಸನ ವಾಣಿ ಭಾರತಿ
ಭರತನಿಂದೊಡಗೂಡಿ ಲಿಂಗದಿ
ಇರುತಿಹರು ಮಿಕ್ಕಾದಿತೇಯರಿಗಿಲ್ಲವಾಸ್ಥಾನ  ||  ೧೨  ||

ಜೀವನಕೆ ತುಷದಂತೆ ಲಿಂಗವು
ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿಪ್ಪುದು ಭಗವದಿಚ್ಛೆಯಲಿ |
ಕೇವಲ ಜಡ ಪ್ರಕೃತಿ ಇದಕಧಿ-
ದೇವತೆಯು ಮಹಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು  ||  ೧೩  ||

ಆರಧಿಕ ದಶಕಲೆಗಳುಳ್ಳ ಶ
ರೀರವನಿರುದ್ಧಗಳ ಮಧ್ಯದಿ
ಸೇಪ್ಪವು ಜೀವ ಪರಮಾಚ್ಛಾದಿಕದ್ವಯವು |
ಬಾರದಂದದಿ ದಾನವರನತಿ
ದೂರಗೈಸುತ ಶ್ರೀ ಜನಾರ್ದನ
ಮೂರು ಗುಣದೊಳಗಿಪ್ಪನೆಂದಿಗು ತ್ರಿವೃತುವೆಂದೆನಿಸಿ  ||  ೧೪  ||

ರುದ್ರ ಮೊದಲಾದಮರರಿಗೆ ಅನಿ
ರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರಲ್ಲಿಂದಿತ್ತ ಸ್ಥೂಲದಲಿ |
ಕೃದ್ಧ ಖಳದಿವಿಜರು ಪರಸ್ಪರ
ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸ
ಮೃದ್ಧಿಗಳನಾಛರಿಸುವರು ಪ್ರಾಣೇಶನಾಜ್ಞೆಯಲಿ  ||  ೧೫  ||

ಮಹಿಯೊಳಗೆ ಸುಕ್ಷೇತ್ರ ತೀರ್ಥದಿ
ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕತ್ರಯ ಧರ್ಮ ಕರ್ಮಗಳ |
ದೃಹಿಣ ಮೊದಲಾದಮರರೆಲ್ಲರು
ವಹಿಸಿ ಗುಣಗಳನನುಸರಿಸಿ ಸ
ನ್ನಿಹಿತರಾಗಿದ್ದೆಲ್ಲರೊಳು ಮಾಡುವರು ವ್ಯಾಪಾರ  ||  ೧೬  ||

ಕೇಶ ಸಾಸಿರ ವಿಧ ವಿಭಾಗವ
ಗೈಸಲೆನಿತನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದೀ ದೇಹ ಮಧ್ಯದಲಿ |
ಆ ಸುಷುಮ್ನಕೆ ವಜ್ರ ಕಾರ್ಯ ಪ್ರ
ಕಾಶಿನೀ ವೈದ್ಯುತಿಗಳಿಹವು ಪ್ರ
ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ  ||  ೧೭  ||

ಆ ನಳಿನಭವ ನಾಡಿಯೊಳಗೆ ತ್ರಿ
ಕೋಣ ಚಕ್ರವು ಇಪ್ಪುದಲ್ಲಿ ಕೃ
ಶಾನುಮಂಡಲ ಮಧ್ಯಗನು ಸಂಕರುಷಣಾಹ್ವಯನು |
ಹೀನ ಪಾಪಾತ್ಮಕ ಪುರುಷನ
ಹಾನಿಗೈಸುತ ದಿನದಿನದಿ ವಿ
ಜ್ಞಾನಮಯ ಶ್ರೀವಾಸುದೇವನು ಐದಿಸುವ ಕರುಣಿ  ||  ೧೮  ||

ಮಧ್ಯನಾಡಿಯ ಮಧ್ಯದಲಿ ಹೃ
ತ್ಪದ್ಮ ಮೂಲದಿ ಮೂಲಪತಿ ಪದ
ಪದ್ಮ ಮೂಲದಲಿಪ್ಪ ಪವನನ ಪಾದ ಮೂಲದಲಿ |
ಪೊದ್ದಿಕೊಂಡಿಹ ಜೀವಲಿಂಗನಿ
ರುದ್ಧ ದೇಹ ವಿಶಿಷ್ಟನಾಗಿ ಕ
ಪರ್ದಿ ಮೊದಲಾದಮರರೆಲ್ಲರು ಕಾದುಕೊಂಡಿಹರು  ||  ೧೯  ||

ನಾಳ ಮಧ್ಯದಲಿಪ್ಪ ಹೃತ್ಕೀ
ಲಾಲಜದೊಳಿಪ್ಪಷ್ಟದಳದಿ ಕು
ಲಾಲ ಚಕ್ರದ ತೆರದಿ ಚರಿಸುತ ಹಂಸ ನಾಮಕನು |
ಕಾಲ ಕಾಲಗಳಲ್ಲಿ ಎಣ್ದೆಸೆ
ಪಾಲಕರ ಕೈ ಸೇವೆಗೊಳುತ ಕೃ
ಪಾಳು ಅವರಭಿಲಾಷೆಗಳ ಪೂರೈಸಿಕೊಡುತಿಪ್ಪ  ||  ೨೦  ||

ವಾಸವಾನುಜ ರೇಣುಕಾತ್ಮಜ
ದಾಶರಥಿ ವೃಜಿನಾರ್ದನಮಲ ಜ
ಲಾಶಯಾಲಯ ಹಯವದನ ಶ್ರೀ ಕಪಿಲ ನರಸಿಂಹ |
ಈಸು ರೂಪದೊಳವರವರು ಸಂ
ತೋಷ ಪಡಿಸುವ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನೆಂದೆನಿಸಿ  ||  ೨೧  ||

ಸುರಪನಾಲಯಕೈದಿದಡೆ ಮನ
ವೆರಗುವುದು ಸತ್ಪುಣೈಅ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರಾಲಸ್ಯ ಹಸಿ ತೃಷೆಯು |
ತರಣಿ ತನಯನಿಕೇತನದಿ ಸಂ
ಭರಿತ ಕೋಪಾಟೋಪ ತೋರುವು
ದರವಿದೂರನು ನಿಋ ಋತಿಯೊಳಿರೆ ಪಾಪಗಳ ಮಾಳ್ಪ  ||  ೨೨  ||

ವರುಣನಲ್ಲಿ ವಿನೋದ ಹಾಸ್ಯವು
ಮರುತನೊಳು ಗಮನಾಗಮನ ಹಿಮ
ಕರಧನಾಧಿಪರಲ್ಲಿ ಧರ್ಮದ ಬುದ್ಧಿ ಜನಿಸುವುದು |
ಹರನ ಮಂದಿರದಲ್ಲಿ ಗೋಧನ
ಧರಣಿ ಕನ್ಯಾ ದಾನಗಳು ಒಂ
ದರೆಗಳಿಗೆ ತಡೆಯದಲೆ ಕೊಡುತಿಹ ಚಿತ್ತ ಪುಟ್ಟುವುದು  ||  ೨೩  ||

ಹೃದಯದೊಳಗೆ ವಿರಕ್ತಿ ಕೇಸರ
ಕೊದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬರೆ ಜಾಗ್ರತಿಯು ಪುಟ್ಟುವುದು |
ಸುದರುಶನ ಮೊದಲಾದ ಅಷ್ಟಾ
ಯುಧವ ಪಿಡಿದು ದಿಶಾಧಿಪತಿಗಳ
ಸದನದಲಿ ಸಂಚರಿಸುತೀ ಪರಿ ಬುದ್ಧಿಗಳ ಕೊಡುವ  ||  ೨೪  ||

ಸೂತ್ರನಾಮಕ ಪ್ರಾಣಪತಿ ಗಾ
ಯತ್ರಿ ಸಂಪ್ರತಿಪಾದ್ಯನಾಗೀ
ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡ ಕಂಡಲ್ಲಿ |
ಧಾತ್ರಿಯೊಳು ಸಂಚರಿಸಿ ಪುತ್ರಕ
ಳತ್ರ ಸಹಿತನುದಿನದಿ ತೀರ್ಥ
ಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು  ||  ೨೫  ||

ನಾರಸಿಂಹ ಸ್ವರೂಪದೊಳಗೆ ಶ 
ರೀರನಾಮದಿ ಕರೆಸುವನು ಹದಿ
ನಾರು ಕಳೆಗಳನುಳ್ಳಲಿಂಗದಿ ಪುರುಷನಾಮಕನು |
ತೋರುವನು ಅನಿರುದ್ಧ್ನನೊಳು ಶಾಂ
ತೀ ರಮಣನನಿರುದ್ಧರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲಕಳೇವರದೊಳಿದ್ದು  || ೨೬ ||

ಮೊದಲು ತ್ವಕ್ ಚರ್ಮಗಳು ಮಾಂಸವು
ರುಧಿರ ಮೇದೋಮಜ್ಜಾಸ್ಥಿಗ
ಳಿದರೊಳಗೆ ಏಕೋನ ಪಂಛಾಶನ್ಮರುದ್ಗಣವು | 
ನಿಧನ ಹಿಂಕಾರಾದಿ ಸಾಮಗ
ನದರನಾಮದಿ ಕರೆಸುತೊಂಬ
ತ್ತಧಿಕ ನಾಲ್ವತ್ತೆನಿಪರೂಪದಿ ಧಾತುಗಳೊಳಿಪ್ಪ  ||  ೨೭ ||

ಸಪ್ತಧಾತುಗಳೊಳಹೊರಗೆ ಸಂ
ತಪ್ತಲೋಹಗತಾಗ್ನಿಯಂದದಿ
ಸಪ್ತ ಸಾಮಗನಿಪ್ಪನನ್ನ್ಮಯಾದಿ ಕೋಶದೊಳು |
ಲಿಪ್ತನಾಗದೆ ತತ್ತದಾಹ್ವಯ
ಕ್ಲುಪ್ತ ಭೋಗವ ಕೊಡುತ ಸ್ವಪ್ನ ಸು
ಷುಪ್ತಿ ಜಾಗ್ರತಿಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ  ||  ೨೮  ||

ತೀವಿಕೊಂಡಿಹವಲ್ಲಿ ಮಜ್ಜ ಕ
ಳೇವರದಲಂಗುಲಿಯ ಪರ್ವದ
ಠಾವಿನಲಿ ಮುನ್ನೂರ ಅರವತ್ತೆನಿಪ ತ್ರಿಸ್ಥಳದಿ |
ಸಾವಿರದ ಎಂಭತ್ತು ರೂಪವ
ಕೋವಿದರು ಪೇಳುವರು ದೇಹದಿ
ದೇವತೆಗಳೊಡಗೂಡಿ ಕ್ರೀಡಿಸುವನು ರಮಾರಮಣ  || ೨೯  ||

ಕೀಟಪೇಶಸ್ಕಾರಿ ನೆನವಲಿ
ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನೈದಿಯಾಡುವ ತೆರದಿ ಭಕುತಿಯಲಿ |
ಕೈಟಭಾರಿಯ ಧ್ಯಾನದಿಂದ ಭ
ವಾಟವಿಯನತಿ ಶೀಘ್ರದಿಂದಲಿ 
ದಾಟಿ ಸಾರೂಪ್ಯವನುಯೈದುವರಲ್ಪ ಜೀವಿಗಳು  ||  ೩೦  ||

ಈ ಪರಿಯ ದೇಹದೊಳು ಭಗವ
ದ್ರೂಪಗಳ ಮರಿಯದಲೆ ಮನದಿ ಪ
ದೇ ಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನು |
ಗೋಪತಿ ಜಗನ್ನಾಥ ವಿಠ್ಠಲ ಸ
ಮೀಪಗನು ತಾನಾಗಿ ಸಂತತ
ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ  ||  ೩೧ ||